ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Ammasandra Suresh: ಹೊಣೆಗಾರಿಕೆ ಮರೆತರೆ ಕಾನೂನು ಕ್ರಮ ಖಾತ್ರಿ !

ನಿಖರ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಮಾಹಿತಿಗಳನ್ನು ಮಾತ್ರ ಗ್ರೂಪ್‌ನಲ್ಲಿ ಹಂಚಿ ಕೊಳ್ಳುವಂತಾಗುವುದರ ಕುರಿತು ‘ಗ್ರೂಪ್ ಅಡ್ಮಿನ್’ ಸದಾ ಜಾಗೃತ ನಾಗಿರಬೇಕಾಗುತ್ತದೆ. ಜಾತಿ, ಧರ್ಮ, ಲಿಂಗ ಅಥವಾ ರಾಷ್ಟ್ರವಿರೋಧಿ ವಿಷಯಗಳು ಗ್ರೂಪ್‌ ನಲ್ಲಿ ಶೇರ್ ಆದರೆ ಅಡ್ಮಿನ್‌ಗಳು ಕಾನೂನು ವಿಚಾರಣೆಗೆ ಒಳಪಡಬೇಕಾಗುತ್ತದೆ.

ಹೊಣೆಗಾರಿಕೆ ಮರೆತರೆ ಕಾನೂನು ಕ್ರಮ ಖಾತ್ರಿ !

Profile Ashok Nayak Apr 8, 2025 5:51 AM

ಜನಜಾಗೃತಿ

ಡಾ.ಅಮ್ಮಸಂದ್ರ ಸುರೇಶ್

ಯಾವುದೇ ವ್ಯಕ್ತಿಯು ತನ್ನ ವೀಕ್ಷಣೆಗಳು, ಛಾಯಾಚಿತ್ರಗಳು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕೆ ಅನುವುಮಾಡಿಕೊಡುವ ಗುಂಪನ್ನು ರಚಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಕಾಶವಿರುತ್ತದೆ. ಇಂಥ ಗುಂಪುಗಳ ರಚನೆಯಲ್ಲಿ ಅಡ್ಮಿನ್‌ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ವಾಟ್ಸ್ಯಾಪ್ ಗ್ರೂಪ್‌ಗಳ ಅಡ್ಮಿನ್‌ಗಳ ಜವಾಬ್ದಾರಿ ಏನು? ಎಂಬ ವಿಷಯವೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಟ್ಸ್ಯಾಪ್ ಗುಂಪುಗಳಲ್ಲಿ ಯಾರು ಏನು ಬೇಕಾದರೂ ಶೇರ್ ಮಾಡಬಹುದು ಎಂಬ ಪ್ರವೃತ್ತಿ ಇತ್ತೀಚೆಗೆ ಬೆಳೆಯುತ್ತಿದೆ. ಸುಮ್ಮನೆ ಬೇಕಾಬಿಟ್ಟಿ ಗ್ರೂಪ್‌ ಗಳನ್ನು ರಚಿಸುವುದು, ಕಂಡ ಕಂಡ ವಿಷಯಗಳನ್ನು ಶೇರ್ ಮಾಡುವುದಷ್ಟೇ ವಾಟ್ಸ್ಯಾಪ್ ಗ್ರೂಪ್‌ನ ಅಡ್ಮಿನ್‌ಗಳ ಕೆಲಸ ಎಂದು ಕೆಲವರು ಭಾವಿಸಿ‌ ದಂತಿದೆ.

ಆದರೆ ಹಾಗೆ ಶೇರ್ ಮಾಡುವಾಗ ಸಂಬಂಧಿಸಿದ ವಿಷಯದ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು ಸೇರಿದಂತೆ ಗ್ರೂಪ್‌ಗಳ ಸಂಪೂರ್ಣ ನಿರ್ವಹಣೆಯೂ ಅಡ್ಮಿನ್‌ಗಳದ್ದೇ ಆಗಿರುತ್ತದೆ ಎಂಬುದನ್ನು ಅರಿಯಬೇಕು. ಅಂದರೆ, ಗ್ರೂಪ್‌ನಲ್ಲಿ ಸದಸ್ಯರನ್ನು ಸೇರಿಸು ವುದು ಮತ್ತು ತೆಗೆಯುವುದು ಮಾತ್ರವಲ್ಲದೆ, ಅಸಂಬದ್ಧ ಅಥವಾ ಹಾನಿಕಾರಕ ವಿಷಯ ಗಳನ್ನು ತೆಗೆದುಹಾಕುವುದು, ಗ್ರೂಪ್ ನಲ್ಲಿನ ಚಟುವಟಿಕೆಗಳು ನಿಯಮಬದ್ಧವಾಗಿವೆಯೇ ಎಂದು ನೋಡಿಕೊಳ್ಳುವುದು ಕೂಡ ಅಡ್ಮಿನ್‌ಗಳ ಹೊಣೆಯೇ.

ಆದ್ದರಿಂದ, ನಿಖರ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಮಾಹಿತಿಗಳನ್ನು ಮಾತ್ರ ಗ್ರೂಪ್‌ನಲ್ಲಿ ಹಂಚಿಕೊಳ್ಳುವಂತಾಗುವುದರ ಕುರಿತು ‘ಗ್ರೂಪ್ ಅಡ್ಮಿನ್’ ಸದಾ ಜಾಗೃತ ನಾಗಿರಬೇಕಾಗುತ್ತದೆ. ಜಾತಿ, ಧರ್ಮ, ಲಿಂಗ ಅಥವಾ ರಾಷ್ಟ್ರವಿರೋಧಿ ವಿಷಯಗಳು ಗ್ರೂಪ್‌ ನಲ್ಲಿ ಶೇರ್ ಆದರೆ ಅಡ್ಮಿನ್‌ಗಳು ಕಾನೂನು ವಿಚಾರಣೆಗೆ ಒಳಪಡಬೇಕಾಗುತ್ತದೆ.

ಇದನ್ನೂ ಓದಿ: Ravi Hunj Column: ಜನಕನ ಆಸ್ಥಾನವೂ, ಅನುಭವ ಮಂಟಪವೂ

ಗ್ರೂಪ್‌ನ ಯಾವುದೇ ಸದಸ್ಯರು ಸುಳ್ಳು ಸುದ್ದಿಗಳನ್ನು ಹಂಚಿದರೆ, ಅಡ್ಮಿನ್ ತಕ್ಷಣ ಕ್ರಮ ಕೈಗೊಂಡು ಅವುಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಆ ವಿಷಯಕ್ಕೆ ಅಡ್ಮಿನ್ ಸಮ್ಮತಿ ನೀಡಿದ್ದಾರೆ ಎಂದರ್ಥವಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ/ಲೈಂಗಿಕ ವಿಡಿಯೋಗಳನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂಥ ಪ್ರಕರಣ ಗಳಲ್ಲಿ ಅಡ್ಮಿನ್‌ನ ಜತೆಜತೆಗೆ ಅದನ್ನು ಹಂಚಿಕೊಂಡ ಸದಸ್ಯನನ್ನೂ ಹೊಣೆಗಾರನನ್ನಾಗಿ ಮಾಡಲಾಗುತ್ತದೆ.

ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಬಗ್ಗೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕಳವಳ ವ್ಯಕ್ತವಾಗಿದೆ. ಏಕೆಂದರೆ, ನಕಲಿ ಸುದ್ದಿಗಳು, ಮಾರ್ಫ್ ಮಾಡಿದ ಛಾಯಾಚಿತ್ರಗಳು ಮತ್ತು ಸ್ಥಳೀಯ ನಿರೂಪಣೆಗಳೊಂದಿಗಿನ ಗೊಂದಲದ ವಿಡಿಯೋಗಳನ್ನು ಸುಲಭವಾಗಿ ಶೇರ್ ಮಾಡಿ ಹರಡಬಹುದು.

ಇದು ಒಂದು ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಕೋಮು ಬಿರುಕುಗಳನ್ನು ಉಂಟು ಮಾಡ ಬಹುದು ಎಂಬುದಾಗಿ ಪ್ರಕರಣವೊಂದರ ವಿಚಾರಣೆಯ ವೇಳೆ ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, “ಗುಂಪಿನ ಸದಸ್ಯರು ಮಾಡಿರುವ ಯಾವುದೇ ನಿರೂಪಣೆ/ ಹೇಳಿಕೆಯು ನಕಲಿಯಾಗಿದ್ದರೆ, ಅದು ಧಾರ್ಮಿಕ ಸಾಮರಸ್ಯವನ್ನು ಕದಡಬಹುದು ಅಥವಾ ವದಂತಿ ಯನ್ನು ಉಂಟುಮಾಡಿ ಗಲಭೆಗಳಿಗೆ ಪ್ರಚೋದಿಸಬಹುದು ಎಂದು ಕಂಡುಬಂದರೆ, ಗುಂಪಿನ ನಿರ್ವಾಹಕರು ಅದನ್ನು ತಕ್ಷಣ ಗುಂಪಿನಲ್ಲಿ ಡಿಲೀಟ್ ಮಾಡಬೇಕು ಮತ್ತು ಅಂಥ ವಿಷಯವನ್ನು ಹಂಚಿಕೊಂಡ ಸದಸ್ಯರನ್ನು ಗುಂಪಿನಿಂದ ತೆಗೆದುಹಾಕಬೇಕು.

ಎಲ್ಲಕ್ಕಿಂತ ಹೆಚ್ಚಾಗಿ, ಸಾಮಾಜಿಕ ಮಾಧ್ಯಮಗಳ ಗುಂಪು ನಿರ್ವಾಹಕರು ಅದರ ಜವಾಬ್ದಾರಿ ಹೊರಲು ಸಿದ್ಧರಾಗಿರಬೇಕು. ಆ ಬಾಬತ್ತಿನಲ್ಲಿ ಒಂದೊಮ್ಮೆ ನಿಷ್ಕ್ರಿಯರಾದರೆ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳ ಲಾಗುತ್ತದೆ" ಎಂದು ಅಭಿಪ್ರಾಯಪಟ್ಟಿದೆ.

ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವಾಗುತ್ತದೆ, ಅದರಲ್ಲಿ ಎರಡು ಮಾತಿಲ್ಲ. ಅದರೊಂದಿಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕಾಗು ತ್ತದೆ ಎಂಬುದನ್ನು ಮರೆಯಬಾರದು. ವಾಟ್ಸ್ಯಾಪ್, -ಸ್‌ಬುಕ್ ಸೇರಿದಂತೆ ಗ್ರೂಪ್‌ಗಳಲ್ಲಿ ಹಂಚಿಕೆಯಾಗುವ ಸಂದೇಶಗಳು, ಚಿತ್ರಗಳು ಮತ್ತು ವಿಡಿಯೋಗಳ ನಿಯಂತ್ರಣಕ್ಕೆ ಸಂಬಂಧಿಸಿ ಭಾರತದಲ್ಲಿ ಇದುವರೆಗೂ ಪ್ರತ್ಯೇಕ ಕಾನೂನುಗಳು ರಚನೆ ಯಾಗಿಲ್ಲ.

ಆದರೆ ಸೈಬರ್ ಅಪರಾಧ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆ 2020ರ ಸೆಕ್ಷನ್ 153, 154 ಮತ್ತು 167 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಅವಕಾಶಗಳಿವೆ. ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್‌ಗಳನ್ನು ಹೊಣೆಗಾರರನ್ನಾಗಿ ಮಾಡುವ ಉದ್ದೇಶದಿಂದಲೇ ಮಾಹಿತಿ ತಂತ್ರಜ್ಞಾನ ಕಾಯ್ದೆ 2020ಕ್ಕೆ ತಿದ್ದುಪಡಿ ತರಲಾಗಿದೆ. ಇದರ ಸೆಕ್ಷನ್ 67ರ ಅನ್ವಯ, ವಾಟ್ಸ್ಯಾಪ್ ಗುಂಪಿನ ಅಡ್ಮಿನ್ ಅನ್ನು ‘ಮಧ್ಯಸ್ಥಿಕೆದಾರ’ ಎಂದು ವ್ಯಾಖ್ಯಾನಿಸ ಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ‘ದೇಶವಿರೋಧಿ’ ಕಾಮೆಂಟ್ ಗಳನ್ನು ಹರಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ 2023ರಲ್ಲಿ ವಾಟ್ಸ್ಯಾಪ್ ಗ್ರೂಪ್ ಒಂದರ ನಿರ್ವಾಹಕರನ್ನು ಬಂಧಿಸಲಾಗಿತ್ತು. ಮುಂದೆ ಉಲ್ಲೇಖಿಸಲಾಗಿರುವ ಸಂದರ್ಭಗಳಲ್ಲಿ ಗ್ರೂಪ್‌ನ ಅಡ್ಮಿನ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬಹುದು:

*ಸುಳ್ಳು ಸುದ್ದಿಗಳನ್ನು, ಕೋಮು ದಳ್ಳುರಿಗೆ ಕಾರಣವಾಗುವ ಸಂದೇಶ, ಚಿತ್ರ ಅಥವಾ ವಿಡಿಯೋಗಳನ್ನು ಸ್ವತಃ ತಾನು ಹಾಕಿದ್ದರೆ ಅಥವಾ ಗುಂಪಿನ ಸದಸ್ಯರ ಮೂಲಕ ಹಾಕಿಸಿದ್ದರೆ; ಯಾವುದೇ ವ್ಯಕ್ತಿ, ಸಮುದಾಯಗಳ ವಿರುದ್ಧದ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಸಂದೇಶ, ಚಿತ್ರಗಳು ಅಥವಾ ವಿಡಿಯೋಗಳನ್ನು ಸದಸ್ಯರು ಶೇರ್ ಮಾಡಿದ್ದರೆ ಅಥವಾ ಶೇರ್ ಮಾಡಿದ ತಕ್ಷಣ ಅವನ್ನು ಡಿಲೀಟ್ ಮಾಡಿರದಿದ್ದರೆ; *ದೇಶದ್ರೋಹದ ಸಂದೇಶಗಳು, ರಾಷ್ಟ್ರದ ಏಕತೆಗೆ ಧಕ್ಕೆ ತರುವ ವಿಷಯಗಳು, ವ್ಯಕ್ತಿಗಳ ಖಾಸಗಿ ಚಿತ್ರ ಅಥವಾ ವಿಡಿಯೋಗಳನ್ನು ಸದಸ್ಯರು ಹಾಕಿದಾಗ ಎಚ್ಚರ ವಹಿಸಿ ಅಂಥವು ಗಳನ್ನು ಡಿಲೀಟ್ ಮಾಡದಿದ್ದರೆ ಮತ್ತು ಅಂಥ ವಿಷಯಗಳನ್ನು ಶೇರ್ ಮಾಡಿದ ಸದಸ್ಯ ರನ್ನು ಗುಂಪಿನಿಂದ ಹೊರಹಾಕದಿದ್ದರೆ;

ಅಶ್ಲೀಲತೆ/ಲೈಂಗಿಕತೆಯನ್ನು ಪ್ರಚೋದಿಸುವ ಚಿತ್ರಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿದರೆ ಅಥವಾ ಗುಂಪಿನ ಬೇರೆ ಸದಸ್ಯರು ಇಂಥವನ್ನು ಶೇರ್ ಮಾಡಿದಾಗ ಅವನ್ನು ಡಿಲೀಟ್ ಮಾಡಿ ಅಂಥ ಸದಸ್ಯರನ್ನು ಗುಂಪಿನಿಂದ ತೆಗೆದುಹಾಕದಿದ್ದರೆ;

ಯಾವುದೇ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ಅಥವಾ ವಿಷಯಗಳನ್ನು ಶೇರ್ ಮಾಡಿದರೆ;

ಗುಂಪುಗಳಲ್ಲಿ ಶೇರ್ ಮಾಡಲಾದ ವಿಷಯಗಳನ್ನು ತಕ್ಷಣ ತೆಗೆದುಹಾಕದಿದ್ದ ಸಂದರ್ಭ ದಲ್ಲಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಅವನ್ನು ಗ್ರೂಪಿ ನಿಂದ ಡಿಲೀಟ್ ಮಾಡಿ ಅಂಥ ಸದಸ್ಯರನ್ನು ಗುಂಪಿನಿಂದ ಹೊರಹಾಕಿದರು ಕೂಡ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳಬಹುದು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇಂಥ ಪ್ರಕರಣಗಳಲ್ಲಿ ಅಡ್ಮಿನ್ ಅನ್ನು ತಪ್ಪಿತಸ್ಥನನ್ನಾಗಿಸುವುದರ ಜತೆಗೆ ಅಂಥ ವಿಷಯಗಳನ್ನು ಹಂಚಿಕೊಂಡ ಸದಸ್ಯರ ಮೇಲೂ ಕಾನೂನು ಕ್ರಮವನ್ನು ಕೈಗೊಳ್ಳಬಹುದು. ಈ ಹಿಂದೆ ಹಲವು ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ‘ಅಡ್ಮಿನ್ ಜವಾಬ್ದಾರ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಕೆಲವು ರಾಜ್ಯಗಳ ಉಚ್ಚ ನ್ಯಾಯಾಲಯಗಳು ಅಭಿಪ್ರಾಯಪಟ್ಟಿವೆ.

ಉದಾಹರಣೆಗೆ, ಕಿಶೋರ್ ಚಿಂತಾಮನ್ ತರೋಣೆ ವರ್ಸಸ್ ಸ್ಟೇಟ್ ಬ್ಯಾಂಕ್ ಆಫ್‌ ಮಹಾರಾಷ್ಟ್ರ ಪ್ರಕರಣದಲ್ಲಿ, ‘ವಾಟ್ಸ್ಯಾಪ್ ಗುಂಪಿನಲ್ಲಿ ಮತ್ತೊಬ್ಬ ಸದಸ್ಯರು ಹಂಚಿ ಕೊಂಡ ಅಸಭ್ಯ ಪೋಸ್ಟ್‌ಗೆ ಅಡ್ಮಿನ್‌ನನ್ನು ಮಾತ್ರ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದನ್ನು ಗಮನಿಸಬಹುದು. ಆದರೆ ಇಂಥ ಸಂದರ್ಭಗಳಲ್ಲಿ ವಿಷಯವನ್ನು ಹಂಚಿಕೊಂಡ ಸದಸ್ಯರು ಮಾತ್ರ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಈ ಎಲ್ಲ ಕಾರಣಗಳಿಂದ ವಾಟ್ಸ್ಯಾಪ್ ಅಥವಾ ಫೇಸ್ ಬುಕ್‌ನಲ್ಲಿ ಯಾವುದೇ ಗುಂಪನ್ನು ರಚಿಸುವ ಅಥವಾ ಅಡ್ಮಿನ್ ಆಗುವ ಮುನ್ನ, ಸಂಬಂಧಿತ ಜವಾಬ್ದಾರಿಗಳ ಕುರಿತು ಎರಡೆರಡು ಬಾರಿ ಯೋಚಿಸುವುದೊಳಿತು. ಮಾತ್ರವಲ್ಲದೆ, ಕಂಡಕಂಡ ಸುದ್ದಿಗಳು, ವಿಷಯಗಳು, ಸಂಗತಿಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅವುಗಳ ನಿಖರತೆ, ವಿಶ್ವಾಸಾರ್ಹತೆಯನ್ನು ಮಾತ್ರವಲ್ಲದೆ, ಅವು ಸಾಮಾಜಿಕ ಶಾಂತಿಯನ್ನು ಕದಡುವ ಸ್ವರೂಪದವಲ್ಲ, ವ್ಯಕ್ತಿಗಳ ಖಾಸಗಿತನಕ್ಕೆ ಮತ್ತು ರಾಷ್ಟ್ರದ ಏಕತೆಗೆ ಧಕ್ಕೆ ತರುವಂಥವಲ್ಲ ಎಂಬುದನ್ನು ಗುಂಪಿನ ಅಡ್ಮಿನ್‌ಗಳು ಹಾಗೂ ಸದಸ್ಯರು ಖಾತ್ರಿಪಡಿಸಿ ಕೊಳ್ಳಬೇಕು.

(ಲೇಖಕರು ಹವ್ಯಾಸಿ ಬರಹಗಾರರು)