ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namaz On Roads: ರಂಜಾನ್‌ ವೇಳೆ ಈ ಕೆಲಸ ಮಾಡಿದರೆ ಪಾಸ್‌ಪೋರ್ಟ್‌, ಲೈಸೆನ್ಸ್‌ ಕ್ಯಾನ್ಸಲ್‌!

Namaz On Roads: ರಂಜಾನ್‌ ವೇಳೆ ಪ್ರಾರ್ಥನೆ ಸಲ್ಲಿಸಲು ಸ್ಥಳೀಯ ಮಸೀದಿ ಅಥವಾ ಅದಕ್ಕೆಂದು ಪೊಲೀಸರು ಗೊತ್ತುಪಡಿಸಿದ ಈದ್ಗಾ ಮೈದಾನಗಳಲ್ಲಿಯೇ ಜನರು ಒಟ್ಟು ಸೇರಬೇಕು ಮತ್ತು ಯಾರೂ ರಸ್ತೆಯಲ್ಲಿ ನಮಾಜ್‌ ಸಲ್ಲಿಸಬಾರದು ಎಂದು ಮೀರತ್ ನಗರ ಪೊಲೀಸ್ ವರಿಷ್ಠಾಧಿಕಾರಿ(Meerut Superintendent Police) ಆಯುಷ್ ವಿಕ್ರಮ್ ಸಿಂಗ್ ಖಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ.

ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡಿದ್ರೆ...ಖಡಕ್‌ ವಾರ್ನಿಂಗ್ ಕೊಟ್ಟ ಪೊಲೀಸ್

Profile Sushmitha Jain Mar 28, 2025 12:14 PM

ಮೀರತ್: ಈದ್-ಉಲ್-ಫಿತರ್(Eid-ul-Fitr) ಮತ್ತು ರಂಜಾನ್‌(Ramzan) ನ ಕೊನೆಯ ಶುಕ್ರವಾರದ ಪ್ರಾರ್ಥನೆ(Friday Prayer)ಯ ಮುನ್ನವೇ, ಮೀರತ್ ಪೊಲೀಸರು ರಸ್ತೆಗಳಲ್ಲಿ ನಮಾಜ್(Namaz) ಮಾಡುವ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳಲ್ಲಿ ನಮಾಜ್‌ ಸಲ್ಲಿಸಿ ನಿಯಮ ಉಲ್ಲಂಘಿಸುವವರು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದು, ಈ ಕಠಿಣ ಕ್ರಮದ ಭಾಗವಾಗಿ ಕಾನೂನು ಉಲ್ಲಂಘಿಸುವವರ ಪಾಸ್‌ಪೋರ್ಟ್‌ ರದ್ದುಗೊಳಿಸಲು(Passports Getting Cancelled) ಮತ್ತು ವಾಹನ ಚಲಾಯಿಸುವ ಲೈಸೆನ್ಸ್ ರದ್ದು(Driving Licences Revoked) ಗೊಳಿಸಲು ಕೂಡಾ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಂಜಾನ್‌ ವೇಳೆ ಪ್ರಾರ್ಥನೆ ಸಲ್ಲಿಸಲು ಸ್ಥಳೀಯ ಮಸೀದಿ ಅಥವಾ ಅದಕ್ಕೆಂದು ಪೊಲೀಸರು ಗೊತ್ತುಪಡಿಸಿದ ಈದ್ಗಾ ಮೈದಾನಗಳಲ್ಲಿಯೇ ಜನರು ಒಟ್ಟು ಸೇರಬೇಕು ಮತ್ತು ಯಾರೂ ರಸ್ತೆಯಲ್ಲಿ ನಮಾಜ್‌ ಸಲ್ಲಿಸಬಾರದು ಎಂದು ಮೀರತ್ ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ಖಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಈಗಾಗಲೇ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಸಂಬಂಧಪಟ್ಟವರೊಂದಿಗೆ ಸಭೆಗಳನ್ನು ನಡೆಸಲಾಗಿದ್ದು, ಎಲ್ಲರಿಗೂ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಪೊಲೀಸ್‌ ಇಲಾಖೆ ರೂಪಿಸಿರುವ ನಿಯಮಗಳನ್ನು ಚಾಚೂ ತಪ್ಪದಂತೆ ಪಾಳಿಸಲು ಎಲ್ಲರಿಗೂ ಸೂಚಿಸಲಾಗಿದೆ ಎಂದು ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಪಿನ್ ಟಾಡಾ ಹೇಳಿದ್ದಾರೆ.

"ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಲು ಅಥವಾ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಮತ್ತು ಕೋಮು ಸಾಮರಸ್ಯವನ್ನು ಕದಡುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ" ಎಂದು ಎಸ್‌ಎಸ್‌ಪಿ ವಿಪಿನ್‌ ಟಾಡಾ ಹೇಳಿದರು.

ಈ ಹಿಂದೆ ನಡೆದ ಅಹಿತಕರ ಘಟನೆಗಳನ್ನು ಪರಿಶೀಲಿಸಿ ಪೊಲೀಸರು ಹಲವು ಪ್ರದೇಶಗಳನ್ನು ಕೋಮು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ್ದಾರೆ. ಇಂತಹ ಪ್ರದೇಶಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಭದ್ರತೆಯನ್ನು ಬಲಪಡಿಸಲು, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟೆಬ್ಯುಲರಿ (ಪಿಎಸಿ) ಮತ್ತು ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೀರತ್ ಜಿಲ್ಲೆಯ ಹಲವೆಡೆ ಪೊಲೀಸರ‌ ಪಥ ಸಂಚಲನವನ್ನೂ ನಡೆಸಲಾಗುತ್ತಿದೆ.

ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ರಂಜಾನ್‌ ನಂತರವೂ ಬರುವ ಹಬ್ಬಗಳನ್ನು ಸುಗಮವಾಗಿ ಆಚರಿಸಲು ಪೊಲೀಸ್‌ ಇಲಾಖೆ ಮತ್ತು ಸ್ಥಳೀಯ ಆಡಳಿತವು ಪ್ರಮುಖ ಮುಖಂಡರು ಮತ್ತು ಧಾರ್ಮಿಕ ಮುಖಂಡರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಎಸ್‌ಎಸ್‌ಪಿ ಟಾಡಾ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral News: SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಬ್ಯಾಗ್‍ನಲ್ಲಿ ಸಿಕ್ಕಿದ್ದೇನು? ಬೆಚ್ಚಿಬಿದ್ದ ಶಿಕ್ಷಕರು

ಪಾಸ್‌ಪೋರ್ಟ್‌ ರದ್ದು ಹೇಗೆ ಮಾಡಲಾಗುತ್ತದೆ?

ರಸ್ತೆಯಲ್ಲಿ ರಂಜಾನ್‌ ನಮಾಜ್‌ ಸಲ್ಲಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮಿನಲ್‌ ಮೊಕದ್ದಮೆ ದಾಖಲಾಗಿದ್ದಲ್ಲೆ ಅವರ ಪಾಸ್‌ಪೋರ್ಟ್‌ ಮತ್ತು ಲೈಸೆನ್ಸ್‌ ರದ್ದುಗೊಳಿಸಬಹುದು ಎಂದು ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಸಿಂಗ್ ಚೌಧರಿ ಹೇಳಿದ್ದಾರೆ.

“ಈ ರೀತಿ ಆದಲ್ಲಿ, ಮುಂದೆ ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಷ್ಟವಾಗಲಿದೆ. ಈ ಆರೋಪಿಗಳು ನ್ಯಾಯಾಲಯದಲ್ಲಿ ಪ್ರಕರಣ ಮುಗಿದು ದೋಷಮುಕ್ತಗೊಳ್ಳುವವರೆಗೆ ಪಾಸ್‌ಪೋರ್ಟ್‌ ಅಥವಾ ಲೈಸೆನ್ಸ್‌ ಪಡೆಯಲು ಅರ್ಹರಾಗಿರುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ಸ್ಥಳೀಯ ಗುಪ್ತಚರ ತಂಡಗಳು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದರೊಂದಿಗೆ, ವೈಮಾನಿಕ ಕಣ್ಗಾವಲಿಡಲು ಡ್ರೋನ್‌ಗಳನ್ನು ಕೂಡಾ ನಿಯೋಜಿಸಲಾಗುವುದು ಎಂದು ಜಯಂತ್ ಸಿಂಗ್ ಚೌಧರಿ ಮಾಹಿತಿ ನೀಡಿದ್ದಾರೆ.